• ಹಿರಿಯ ನಾಗರೀಕರ ಸಹಾಯ ವಾಣಿ: 1090 / 08226 222030
  • ಮಕ್ಕಳ ಸಹಾಯವಾಣಿ : 1098
  • ತುರ್ತು : 100 / 08226 222383
  • ಅಗ್ನಿ ಶಾಮಕ ದಳ : 101
  • ತುರ್ತು ವಾಹನ ಸೇವಾ: 108

ನಮ್ಮ ಚಾಮರಾಜನಗರ

ಪರಿಚಯ :

ಚಾಮರಾಜನಗರ ಜಿಲ್ಲಾ ಪೊಲೀಸ್ ಘಟಕವು ಮೈಸೂರು ಜಿಲ್ಲೆಯಿಂದ ಪ್ರತ್ಯೇಕಗೊಂಡು ದಿನಾಂಕ 15.08.1997 ರಿಂದ ಹೊಸ ಜಿಲ್ಲೆಯಾಗಿ ಕಾರ್ಯಾರಂಭವನ್ನು ಮಾಡುತ್ತಿದೆ. ಚಾಮರಾಜನಗರ ಜಿಲ್ಲೆಯು ಚಾಮರಾಜನಗರ, ಗುಂಡ್ಲುಪೇಟೆ, ಯಳಂದೂರು, ಕೊಳ್ಳೇಗಾಲ, ಹನೂರು ಒಟ್ಟು 05 ತಾಲ್ಲೂಕುಗಳನ್ನು ಒಳಗೊಂಡಿರುತ್ತದೆ.

ಶ್ರೀ ಚಾಮರಾಜೇಶ್ವರ ಸ್ವಾಮಿ & ಶ್ರೀ ಕೆಂಪನಂಜಾಂಬ ದೇವಸ್ಥಾನಃ-

Sri Chamarajeshwara Swami with Sri Kempananjaamba Temple

ಶ್ರೀ ಕೃಷ್ಣರಾಜ ಒಡೆಯರ್ ಬಹದ್ದೂರ್-3 ರವರ ಆಡಳಿತ ಅವಧಿಯಲ್ಲಿ ಈ ಸ್ಥಳವು ಅರಿಕುಟಾರವೆಂದು ಪ್ರಸಿದ್ದಿಯಲ್ಲಿತ್ತು. ಇವರ ತಂದೆಯವರಾದ ಶ್ರೀ ಚಾಮರಾಜೇಂದ್ರ ಒಡೆಯರ್ ರವರು 1774 ರಲ್ಲಿ ಈ ಸ್ಥಳದಲ್ಲಿ ಜನಿಸಿದರು. ಆದುದರಿಂದಲೇ ಇದು ಜನನ ಮಂಟಪ ಎಂಬ ಹೆಸರಿನಿಂದ ಕರೆಯಲ್ಪಟ್ಟಿದೆ. ಆ ಸಮಯದಲ್ಲಿ ಪ್ರಮುಖ ಹಬ್ಬಗಳು ಮತ್ತು ಹೋಲಿ ಆಚರಣೆಗಳು ಈ ಸ್ಥಳದಲ್ಲಿಯೇ ಜರುಗುತ್ತಿದ್ದವು. ಅಲ್ಲದೇ ಈ ಸ್ಥಳವು ರಾಜನ ತಂದೆಯ ಜನ್ಮಸ್ಥಳವಾದ್ದರಿಂದ ಚಾಮರಾಜನಗರ ಎಂದು ನಾಮಕರಣಗೊಂಡಿದೆ. 1826 ರಲ್ಲಿ ಅವರ ಸ್ಮಾರಕಾರ್ಥವಾಗಿ ಶ್ರೀ ಚಾಮರಾಜೇಶ್ವರ ಸ್ವಾಮಿ & ಶ್ರೀ ಕೆಂಪನಂಜಾಂಬ ದೇವಸ್ಥಾನವನ್ನು ನಿರ್ಮಾಣ ಮಾಡಲಾಯಿತು. ಈಶ್ವರ ದೇವರ ವಿಗ್ರಹವು ಇಲ್ಲಿನ ಪ್ರಮುಖವಾದ ದೇವರ ಮೂರ್ತಿಯಾಗಿದೆ. ಈ ಚಾಮರಾಜೇಶ್ವರ ವಿಗ್ರಹದ ಎಡಭಾಗದಲ್ಲಿ ಶ್ರೀ ಕೆಂಪನಂಜಾಂಬ ಹಾಗೂ ಬಲಭಾಗದಲ್ಲಿ ಶ್ರೀ ಚಾಮುಂಡೇಶ್ವರಿ ಮೂರ್ತಿಗಳನ್ನು ಕಾಣಬಹುದು. ದೇವಸ್ಥಾನದ ಮುಖ್ಯದ್ವಾರದ ಪೂರ್ವಭಾಗದಲ್ಲಿ ಸುಂದರವಾದ ಗೋಪುರ, ದಕ್ಷಿಣದಲ್ಲಿ ಸುಂದರ ಮೂರ್ತಿ ವಿಗ್ರಹ ಮತ್ತು ಇತರ ಹಲವಾರು ದೇವರುಗಳ ಮೂರ್ತಿಗಳು ಹಾಗೂ ಪಶ್ಚಿಮಕ್ಕೆ ಸಹಸ್ರಲಿಂಗ ನಾಮಸ್ವರಗಳು ಮತ್ತು ಪಂಚವಿಮಶ್ತಿ ಲೀಲಾ ಮೂರ್ತಿ, ಕ್ಷೇತ್ರಪಾಲಕ, ತಾಯಿ ಅನ್ನಪೂರ್ಣೇಶ್ವರಿ ವಿಗ್ರಹಗಳು ಸೇರಿದಂತೆ ಒಟ್ಟು 67 ಸುಂದರವಾದ ಕೆತ್ತನೆಗಳು ಕಾಣಸಿಗುತ್ತದೆ.

 

ಶ್ರೀ ಮಲೈ ಮಹದೇಶ್ವರ ಬೆಟ್ಟಃ-.

Malai Hahadeshwara Hills

ಶ್ರೀ ಮಲೈ ಮಹದೇಶ್ವರ ಬೆಟ್ಟ ಭಕ್ತಾದಿಗಳ ಯಾತ್ರಾ ಸ್ಥಳವು ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲ್ಲೂಕಿನಲ್ಲಿರುತ್ತದೆ. ಈ ಸ್ಥಳವು ಮೈಸೂರಿನಿಂದ ಸುಮಾರು 150 ಕಿ.ಮೀ ಹಾಗೂ ಬೆಂಗಳೂರಿನಿಂದ 210 ಕಿ.ಮೀ ಅಂತರದಲ್ಲಿರುತ್ತದೆ. ಪ್ರಾಚೀನ ಮತ್ತು ಪವಿತ್ರ ದೇವಸ್ಥಾನವಾದ ಶ್ರೀ ಮಲೈ ಮಹದೇಶ್ವರ ದೇವಸ್ಥಾನವು ಶಿವನ ಪ್ರಖ್ಯಾತ ಧಾರ್ಮಿಕ ಕೇಂದ್ರವಾಗಿದ್ದು, ಅತೀ ಶಕ್ತಿಯುತ ಶಿವನ ದೇವಸ್ಥಾನಗಳ ಪೈಕಿ ಇದು ಒಂದಾಗಿದೆ. ಲಕ್ಷಾಂತರ ಯಾತ್ರಿಕರು ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳಿಂದ ಈ ಸ್ಥಳಕ್ಕೆ ಪ್ರತಿನಿತ್ಯ ಭೇಟಿ ನೀಡುತ್ತಾರೆ. ಶ್ರೀ ಮಲೈ ಮಹದೇಶ್ವರ ದೇವಸ್ಥಾನದ ತಪ್ಪಲಿನಲ್ಲಿ ತಾಳಬೆಟ್ಟವು ಇರುತ್ತದೆ. ಶ್ರೀ ಮಲೈ ಮಹದೇಶ್ವರ ದೇವಸ್ಥಾನವು ಕೇವಲ ಧಾರ್ಮಿಕ ಸ್ಥಳವಲ್ಲದೇ ಪ್ರಕೃತಿ ಪ್ರಿಯರನ್ನು ಸಹ ಆಕಷರ್ಿಸುತ್ತಿದೆ. ಶ್ರೀ ಮಲೈ ಮಹದೇಶ್ವರ ಬೆಟ್ಟವು ಸಮುದ್ರ ಮಟ್ಟದಿಂದ 3000 ಅಡಿ ಎತ್ತರದಲ್ಲಿರುತ್ತದೆ.

 

ಬಿಳಿಗಿರಿ ರಂಗನಾಥ ದೇವಸ್ಥಾನಃ-

Biligiri Ranganatha Temple

ಚಾಮರಾಜನಗರ ಜಿಲ್ಲಾ ವ್ಯಾಪ್ತಿಯಲ್ಲಿರುವ ಬಿಳಿಗಿರಿ ರಂಗನಾಥ ಬೆಟ್ಟವನ್ನು ಸಾಮಾನ್ಯವಾಗಿ ಬಿ.ಆರ್. ಹಿಲ್ಸ್ ಎಂದು ಕರೆಯುತ್ತಾರೆ. ಇದು ತಮಿಳುನಾಡು ರಾಜ್ಯದ ಗಡಿ ಭಾಗವನ್ನು ಹಂಚಿಕೊಂಡಿದೆ. ಈ ಪ್ರದೇಶವನ್ನು ಬಿಳಿಗಿರಿರಂಗನಾಥ ಸ್ವಾಮಿ ದೇವಸ್ಥಾನ ವನ್ಯಜೀವಿಗಳ ಅಭಯಾರಣ್ಯ ಅಥವಾ ಬಿ.ಆರ್.ಟಿ. ವನ್ಯಜೀವಿಗಳ ಅಭಯಾರಣ್ಯ ಎಂದು ಕರೆಯಲ್ಪಡುತ್ತದೆ. ಈ ಪ್ರದೇಶವನ್ನು ವನ್ಯಜೀವಿ ಸಂರಕ್ಷಣಾ ಕಾಯ್ದೆ 1972 ರ ಅಡಿಯಲ್ಲಿ ಸಂರಕ್ಷಿಸಲಾಗಿದೆ.

 

ಹಿಮವದ್ ಗೋಪಾಲಸ್ವಾಮಿ ಬೆಟ್ಟ:-

Himavad Gopalaswamy Hills

ಹಿಮವದ್ ಗೋಪಾಲಸ್ವಾಮಿ ಬೆಟ್ಟವು ಚಾಮರಾಜನಗರ ಜಿಲ್ಲೆಯಲ್ಲಿದ್ದು, 1450 ಮೀಟರ್ ಎತ್ತರ ಹಾಗೂ ವಿಸ್ತಾರವಾದ ಹಸಿರು ಮರಗಳಿಂದ ಕೂಡಿದ ಪ್ರದೇಶವಾಗಿರುತ್ತದೆ. ಅಲ್ಲದೇ ಇದು ಬಂಡೀಪುರ ನ್ಯಾಷನಲ್ ಪಾರ್ಕ್ಗೆ ಹತ್ತಿರವಾದ ಸ್ಥಳವಾಗಿದ್ದು, ಬಂಡೀಪುರ ನ್ಯಾಷನಲ್ ಪಾರ್ಕ್ಗೆ ನಂತೆಯೇ ಇಲ್ಲಿಯೂ ಸಹ ಆನೆಗಳು ಸೇರಿದಂತೆ ವನ್ಯಜೀವಿಗಳು ವಾಸಿಸುತ್ತಿದೆ. ಈ ಪ್ರದೇಶವು ಹಿಮದಿಂದ ಕೂಡಿದ್ದು, ವರ್ಷದ ಎಲ್ಲಾ ಕಾಲದಲ್ಲಿಯೂ ಹಿಮವು ಕಾಣಸಿಗುವುದು ಇದರ ವಿಶೇಷವಾಗಿರುತ್ತದೆ. ಈ ಬೆಟ್ಟದ ವೇಣುಗೋಪಾಲಸ್ವಾಮಿ(ಶ್ರೀ ಕೃಷ್ಣ) ದೇವಸ್ಥಾನದಿಂದಲೇ ಇದಕ್ಕೆ ಹಿಮವದ್ ಗೋಪಾಲಸ್ವಾಮಿ ಬೆಟ್ಟ ಎಂದು ಹೆಸರು ಬಂದಿರುತ್ತದೆ. ಈ ಬೆಟ್ಟವು ಬೆಂಗಳೂರಿನಿಂದ ಸುಮಾರು 220 ಕಿ.ಮೀ ಹಾಗೂ ಮೈಸೂರಿನಿಂದ 75 ಕಿ.ಮೀ ಮತ್ತು ಗುಂಡ್ಲುಪೇಟೆಯ ಮೈಸೂರು-ಊಟಿ ರಸ್ತೆಯಿಂದ 10 ಕಿ.ಮೀ ಅಂತರದಲ್ಲಿರುತ್ತದೆ. ಈ ಬೆಟ್ಟದ ಮೇಲಿರುವ ದೇವಸ್ಥಾನಕ್ಕೆ ತೆರಳಲು ಸುಗಮವಾದ ರಸ್ತೆ ವ್ಯವಸ್ಥೆಯು ಇರುತ್ತದೆ. ದೇವಸ್ಥಾನಕ್ಕೆ ತೆರಳಲು ಬೆಟ್ಟದ ತಪ್ಪಲಿನಲ್ಲಿ ಅರಣ್ಯ ಇಲಾಖೆಯ ಚೆಕ್ಪೋಸ್ಟ್ ಶುಲ್ಕವನ್ನು ಸಹ ಸಂಗ್ರಹಿಸಲಾಗುತ್ತದೆ. ಪೂಜಾ ಸಾಮಾಗ್ರಿಗಳಾದ ಹೂ, ಹಣ್ಣುಗಳು, ದೂಪದ್ರವ್ಯ ಇತ್ಯಾದಿಗಳನ್ನು ದೇವಸ್ಥಾನಕ್ಕೆ ತೆಗೆದುಕೊಂಡು ಹೋಗಲು ಅವಕಾಶವಿರುತ್ತದೆ. ಆದರೆ ಇತರೆ ಆಹಾರ ಪದಾರ್ಥಗಳನ್ನು ತೆಗೆದುಕೊಂಡು ಹೋಗುವಂತ್ತಿಲ್ಲ. ಇವುಗಳನ್ನು ಪ್ಲಾಸ್ಟಿಕ್ ಬ್ಯಾಗ್/ಕವರ್ಗಳಲ್ಲಿ ತೆಗೆದುಕೊಂಡು ಹೋಗಲು ಅವಕಾಶವಿರುವುದಿಲ್ಲ. ಭಕ್ತಾದಿಗಳು ಬೆಳಿಗ್ಗೆ 08-30 ರಿಂದ ಸಂಜೆ 04-00 ಗಂಟೆಯವರೆಗೆ ದೇವಸ್ಥಾನಕ್ಕೆ ತೆರಳಲು ಅವಕಾಶವಿರುತ್ತದೆ. ಈ ಬೆಟ್ಟದಲ್ಲಿ ರಾತ್ರಿ ತಂಗುವಿಕೆಗೆ ಅವಕಾಶವನ್ನು ಕಲ್ಪಿಸಿಕೊಟ್ಟಿರುವುದಿಲ್ಲ. ಹಾಗೂ ಇಲ್ಲಿನ ಅರಣ್ಯ ಚೆಕ್ಪೋಸ್ಟ್ ಒಳಗೆ ತೆರಳಲು ಖಾಸಗಿ ವಾಹನಗಳಿಗೆ ಅವಕಾಶವಿರುವುದಿಲ್ಲ. ಕೇವಲ ಅರಣ್ಯ ಇಲಾಖೆಯ ವಾಹನದಲ್ಲಿ ಮಾತ್ರ ದೇವಸ್ಥಾನಕ್ಕೆ ಭೇಟಿ ನೀಡಬಹುದಾಗಿರುತ್ತದೆ.

 
Bandipur National Park

ಬಂಡೀಪುರ ರಾಷ್ಟ್ರೀಯ ಉದ್ಯಾನವನ:

ಬಂಡೀಪುರ ರಾಷ್ಟ್ರೀಯ ಉದ್ಯಾನವನ ಹುಲಿ ಸಂರಕ್ಷಣಾ ಯೋಜನೆಯೆಂದು ಘೋಷಿಸಿ 1974 ರಲ್ಲಿ ಸ್ಥಾಪನೆಗೊಂಡಿರುತ್ತದೆ. ಈ ಅಭಯಾರಣ್ಯವು ದಕ್ಷಿಣ ಭಾರತದ ರಾಜ್ಯವಾದ ಕರ್ನಾಟಕದಲ್ಲಿರುತ್ತದೆ. ಬಂಡೀಪುರ ಅಭಯಾರಣ್ಯವು ವಿವಿಧ ಜೀವಿಗಳಿಂದ ಕೂಡಿದ್ದು, ಕಾಡಿನ ಒಣ ಪ್ರದೇಶವು ಹೆಚ್ಚಾಗಿದ್ದು, ದಕ್ಷಿಣ ಏಷಿಯಾದಲ್ಲಿಯೇ ಅತೀ ಹೆಚ್ಚು ಆನೆಗಳನ್ನು ಹೊಂದಿರುವ ಅಭಯಾರಣ್ಯವಾಗಿರುತ್ತದೆ.

ಈ ಬಂಡೀಪುರ ರಾಷ್ಟ್ರೀಯ ಉದ್ಯಾನವನ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲ್ಲೂಕಿನಲ್ಲಿರುತ್ತದೆ. ಮೈಸೂರಿನಿಂದ ಸುಮಾರು 80 ಕಿ.ಮೀ ಅಂತರದಲ್ಲಿದ್ದು, ಪ್ರವಾಸಿಕ ಸ್ಥಳವಾದ ಊಟಿಗೆ ತೆರಳಲು ಈ ಅಭಯಾರಣ್ಯವನ್ನು ಹಾದುಹೋಗಬೇಕಾಗಿರುತ್ತದೆ. ಹೀಗಾಗಿ ಬಂಡೀಪುರವು ಹೆಚ್ಚಿನ ಪ್ರವಾಸಿಗರಿಂದ ಸದಾ ಕೂಡಿರುತ್ತದೆ. ಮತ್ತು ಪ್ರತೀ ವರ್ಷ ರಸ್ತೆ ಅಪಘಾತದಲ್ಲಿ ವನ್ಯಜೀವಿಗಳು ಅಪಘಾತಕ್ಕೊಳಗಾಗುತ್ತಿರುವ ಬಗ್ಗೆ ವರದಿಯಾಗುತ್ತಿರುವುದು ಸಹಾ ಹೆಚ್ಚಾಗುತ್ತಿದೆ. ಆದ್ದರಿಂದ ರಾತ್ರಿ 09-00 ಗಂಟೆಯಿಂದ ಮುಂಜಾನೆ 06-00 ಗಂಟೆಯವರೆಗೆ ವನ್ಯಜೀವಿಗಳ ಸಾವಿನ ಸಂಖ್ಯೆಯನ್ನು ಇಳಿಮುಖಗೊಳಿಸಲು ವಾಹನ ಸಂಚಾರ ವ್ಯವಸ್ಥೆಗೆ ನಿರ್ಬಂಧವನ್ನು ಹೇರಲಾಗಿದೆ.

 

ಸುವರ್ಣಾವತಿ ಮತ್ತು ಚಿಕ್ಕಹೊಳೆ ಜಲಾಶಯ:

Suvarnavathi and Chikka hole Reservoir

ಸುವರ್ಣಾವತಿ ಮತ್ತು ಚಿಕ್ಕಹೊಳೆ ಜಲಾಶಯಗಳು ಚಾಮರಾಜನಗರ ಪಟ್ಟಣದಿಂದ 14 ಕಿ.ಮೀ ಅಂತರದಲ್ಲಿರುತ್ತದೆ. ಕಾವೇರಿಯ ಉಪನದಿಯಾದ ಸುವರ್ಣಾವತಿ ನದಿಗೆ ಅಡ್ಡಲಾಗಿ ಈ ಜಲಾಶಯವನ್ನು ನಿರ್ಮಾಣ ಮಾಡಲಾಗಿದೆ. ಸುವರ್ಣಾವತಿ ಜಲಾಶಯವು ಚಾಮರಾಜನಗರ ತಾಲ್ಲೂಕಿನ ಅಟ್ಟಿಗುಳಿಪುರ ಗ್ರಾಮದಲ್ಲಿದ್ದು, ಇದು ಚಾಮರಾಜನಗರ-ಕೊಯಮತ್ತೂರು ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿರುತ್ತದೆ. ಸುವರ್ಣಾವತಿ ಡ್ಯಾಂ ಮತ್ತು ಇದರ ಚಿಕ್ಕ ಸಹೋದರ ಜಲಾಶಯ ಎಂದು ಕರೆಯಲ್ಪಡುವ ಚಿಕ್ಕಹೊಳೆ ಡ್ಯಾಂಗೆ ನೀರಿನ ಚಾನಲ್ ಲಿಂಕ್ ಆಗಿರುವುದು ವಿಶೇಷವಾಗಿರುತ್ತದೆ. ಈ ಚಿಕ್ಕಹೊಳೆ ಡ್ಯಾಂ ಸುವರ್ಣಾವತಿ ಜಲಾಶಯದಿಂದ ಕೇವಲ 03 ಕಿ.ಮೀ ಅಂತರದಲ್ಲಿರುತ್ತದೆ.

 

©ಕೃತಿಸ್ವಾಮ್ಯ ಚಾಮರಾಜನಗರ ಪೊಲೀಸ್. ಎಲ್ಲ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ವೆಬ್ ಸೈಟ್ ತಾಣದ ವಿನ್ಯಾಸಗಾರರು: ಗ್ಲೋಬಲ್ ಬಜ್®